Daali Dhananjay
ಇತ್ತೀಚೆಗಷ್ಟೆ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ಮದುವೆ ಆದರು. ಡಾಲಿ ಧನಂಜಯ್ ವಿವಾಹಕ್ಕೆ ರಾಜ್ಯಪಾಲರಿಂದ ಹಿಡಿದು ಹಲವಾರು ಸಚಿವರು, ತೆಲುಗು ಮತ್ತು ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಡಾಲಿ ಧನಂಜಯ್ ಅವರ ಅಭಿಮಾನಿಗಳು, ಕುಟುಂಬದವರು ಭಾಗವಹಿಸಿದ್ದರು. ಮೈಸೂರು ಅರಮನೆ ಎದುರಿನ ಬೃಹತ್ ಆದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಬಲು ಅದ್ಧೂರಿಯಾಗಿ ಮದುವೆ ಆದರು. 27 ಎಕರೆ ಬೃಹತ್ ಪ್ರದೇಶವನ್ನು ಇವರ ಮದುವೆಗಾಗಿ ಬಳಸಲಾಗಿತ್ತು. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಮದುವೆಯಲ್ಲೇ ಬಲು ಅದ್ಧೂರಿಯಾ ಮದುವೆ ಇವರದ್ದು ಎನ್ನಬಹುದು.
ಡಾಲಿ ಧನಂಜಯ್ ಅವರು ತಮ್ಮ ಮದುವೆ ಜವಾಬ್ದಾರಿಯನ್ನು ಕರ್ನಾಟಕದ ಖ್ಯಾತ ವೆಡ್ಡಿಂಗ್ ಪ್ಲ್ಯಾನರ್ ಆದ ಧನು ವೆಡ್ಡಿಂಗ್ ಪ್ಲ್ಯಾನರ್ಗೆ ವಹಿಸಿದ್ದರು. ನಟ ಯಶ್ ಸೇರಿದಂತೆ ಹಲವು ದೊಡ್ಡ ಸಿನಿಮಾ ಸೆಲೆಬ್ರಿಟಗಳ, ರಾಜಕಾರಣಿಗಳ ಮಕ್ಕಳ ಮದುವೆಗಳನ್ನು ಮಾಡಿರುವ ಅನುಭವ ಧನು ಅವರಿಗೆ ಇದೆ. ಡಾಲಿ ಧನಂಜಯ್ ಮದುವೆಯ ಒಟ್ಟೊಪ್ಪಂದವನ್ನು ಧನು ಅವರು ಪಡೆದುಕೊಂಡಿದ್ದರು. ಇದರಲ್ಲಿ ಮದುವೆ ಮಾತ್ರವೇ ಅಲ್ಲದೆ ಮೆಹಂದಿ, ಸಂಗೀತ್, ಹಳದಿ ಶಾಸ್ತ್ರದ ಕಾರ್ಯಕ್ರಮಗಳೂ ಸಹ ಸೇರಿದ್ದವು.
ಡಾಲಿ ಅವರ ಮದುವೆಯಲ್ಲಿ ಬಾಣಸಿಗರು, ಬಡಿಸುವವರು, ಸ್ವಚ್ಛತಾಕರ್ಮಿಗಳು, ಸೆಟ್ ಹಾಕುವವರು, ಸ್ಟೇಜ್ ಹಾಕುವವರು, ಫೋಟೊಗ್ರಾಫರ್ಗಳು, ಕ್ರೇನ್ ಹ್ಯಾಂಡಲ್ ಮಾಡುವವರು, ಬೌನ್ಸರ್ಗಳು, ಸ್ಟೈಲಿಸ್ಟ್, ಫ್ಯಾಷನ್ ಡಿಸೈನರ್ಗಳು, ಲೈಟ್ ಉಸ್ತುವಾರಿ ವಹಿಸಿದ್ದವರು, ಭದ್ರತಾ ಸಿಬ್ಬಂದಿ ಹೀಗೆ ಒಟ್ಟು ಸುಮಾರು 2000 ಮಂದಿ ಕೆಲಸ ಮಾಡಿದ್ದಾರೆ. ಡಾಲಿ ಧನಂಜಯ್ ಅವರೇ ಹೇಳಿದಂತೆ ಈ ಮದುವೆ ಸಾಕಷ್ಟು ತಾತ್ಕಾಲಿಕ ಉದ್ಯೋಗವನ್ನೂ ಸೃಷ್ಟಿಸಿದೆ.
Daali Dhananjay: ತೆಲುಗು ಚಿತ್ರರಂಗದಲ್ಲಿ ಡಾಲಿ ಧನಂಜಯ್ಗೆ ಹೆಚ್ಚಿದ ಬೇಡಿಕೆ
ಇನ್ನು ಖರ್ಚಿನ ವಿಷಯಕ್ಕೆ ಬರುವುದಾದರೆ ಡಾಲಿ ಧನಂಜಯ್ರ ಮದುವೆಗೆ ಎರಡು ಸೆಟ್ಗಳನ್ನು ಹಾಕಲಾಗಿತ್ತು, ಈ ಎರಡು ಸೆಟ್ಗಳ ಖರ್ಚೆ ಸುಮಾರು 50 ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ. ಈ ಎರಡು ಸೆಟ್ಗಳನ್ನು ಖ್ಯಾತ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಹಾಕಿದ್ದರು. ಡಾಲಿ ಧನಂಜಯ್ ಮದುವೆಯಲ್ಲಿ ಸುಮಾರು 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ, ಅದರ ಅರೇಂಜ್ಮೆಂಟ್ಸ್ಗೆಂದೇ ಸುಮಾರು 2 ಕೋಟಿಗೂ ಹೆಚ್ಚು ಮೊತ್ತವನ್ನು ಡಾಲಿ ಧನಂಜಯ್ ಖರ್ಚು ಮಾಡಿದ್ದರು. ಜಾಗದ ಬಾಡಿಗೆಗೆ ಸುಮಾರು 25 ಲಕ್ಷ. ಮದುವೆಯ ಇನ್ನಿತರೆ ಖರ್ಚುಗಳು ಸುಮಾರು 2 ಕೋಟಿ ರೂಪಾಯಿಗಳು. ಅಲ್ಲಿಗೆ ಒಟ್ಟು ಸುಮಾರು 5 ಕೋಟಿ ರೂಪಾಯಿಗಳನ್ನು ಡಾಲಿ ಧನಂಜಯ್ ತಮ್ಮ ಮದುವೆಗೆ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಇದು ಅಂದಾಜು ಲೆಕ್ಕವಷ್ಟೆ.