American Investor
ಅಮೆರಿಕ ದೇಶದಲ್ಲಿರುವಷ್ಟು ಹೂಡಿಕೆದಾರರು ವಿಶ್ವದ ಇನ್ಯಾವುದೇ ದೇಶದಲ್ಲಿಲ್ಲ. ಅಮೆರಿಕದ ಹೂಡಿಕೆದಾರರು ಬುದ್ಧಿವಂತ ಹೂಡಿಕೆದಾರರು ಎಂದು ಸಹ ಹೇಳಲಾಗುತ್ತದೆ. ಆದರೆ ಭಾರತೀಯ ಮೂಲದ ಉದ್ಯಮಿಯೊಬ್ಬ ಅಮೆರಿಕದ ದೊಡ್ಡ-ದೊಡ್ಡ ಉದ್ಯಮಿಗಳಿಗೆ ಸರಿಯಾಗಿ ಟೋಪಿ ಹಾಕಿದ್ದು, ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾನೆ.
ಭಾರತ ಮೂಲದ ರಿಶಿ ಷಾ ಕೆಲ ವರ್ಷಗಳಹಿಂದೆಯಷ್ಟೆ ಅಮೆರಿಕದ ಬಿಲೆನಿಯರ್ ಬ್ಯುಸಿನೆಸ್ ಮ್ಯಾನ್ ಗಳಲ್ಲಿ ಒಬ್ಬರಾಗಿದ್ದರು. 2017 ರಲ್ಲಿ ಔಟ್ ಕಮ್ ಹೆಲ್ತ್ ಹೆಸರಿನ ಸಂಸ್ಥೆ ತೆರೆದಿದ್ದರು. ಆದರೆ ಈಗ ಈ ವ್ಯಕ್ತಿ ಜೈಲು ಪಾಲಾಗಿದ್ದಾನೆ. ಹೂಡಿಕೆದಾರರಿಗೆ ಬರೋಬ್ಬರಿ 8300 ಕೋಟಿ ಹಣ ವಂಚನೆ ಮಾಡಿರುವ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ಅಂದಹಾಗೆ ಈತನ ವಂಚನೆಯನ್ನು ಬಯಲಿಗೆಳೆದಿದ್ದು ಅದಾನಿ ಹಿಂದೆ ಬಿದ್ದಿದ್ದ ಅದೇ ಬ್ಲೂಮ್ ಬರ್ಗ್ ಸಂಸ್ಥೆ.
ಅಮೆರಿಕದ ಅತ್ಯುನ್ನತ ಹೂಡಿಕೆ ಸಂಸ್ಥೆಗಳಾದ ಗೋಲ್ಡ್ ಮ್ಯಾನ್ ಸ್ಯಾಚ್ ಗ್ರೂಪ್, ಗೂಗಲ್ ನ ಮಾತೃ ಸಂಸ್ಥೆ ಅಲ್ಫಾಬೆಟ್, ಜೆಬಿ ಪ್ರಿಟ್ಜಿಕರ್ ವೆಂಚರ್ ಕ್ಯಾಪಿಟಲ್ ಇನ್ನೂ ಹಲವರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಬ್ಲೂಮ್ ಬರ್ಗ್ ನೀಡಿರುವ ಮಾಹಿತಿಯಂತೆ ಔಟ್ ಕಮ್ ಹೆಲ್ತ್ ಸ್ಥಾಪನೆ ಶಾ ಅವರ ಕನಸಾಗಿತ್ತಂತೆ. 2006 ರಲ್ಲಿಯೇ ಸಂಸ್ಥೆಯನ್ನು ಪ್ರಾರಂಭಿಸಲಾಯ್ತು.
ಮೆಡಿಕಲ್ ಜಗತ್ತಿನಲ್ಲಿ ಜಾಹೀರಾತು ನೀಡುವ ಸಂಸ್ಥೆ ಇದು, ಸಾಂಪ್ರದಾಯಿಕ ಮಾದರಿಯನ್ನು ಒಡೆದು ವೈದ್ಯರ ಕಚೇರಿ, ಸಿಬ್ಬಂದಿಗಳ ಕೊಠಡಿ, ರೋಗಿಗಳ ಕೊಠಡಿಗಳಲ್ಲಿ ಟಿವಿ ಅಳವಡಿಸಿ ಅದರಲ್ಲಿ ವೈದ್ಯಕೀಯ ಉತ್ಪನ್ನಗಳ ಜಾಹೀರಾತು ಪ್ರಕಟಿಸುವ ಸಂಸ್ಥೆ ಇದಾಗಿತ್ತು. 2010 ರ ಬಳಿಕ ಈ ಸಂಸ್ಥೆ ಆರೋಗ್ಯ ಹೂಡಿಕೆ ಮತ್ತು ತಂತ್ರಜ್ಞಾನದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡಿತು. ಬಳಿಕ ಸಾಕಷ್ಟು ಹೂಡಿಕೆಯೂ ಇವರಿಗೆ ದೊರಕಿತು.
ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ಸಂಸ್ಥೆ ತನ್ನ ಹೂಡಿಕೆದಾರರಿಗೆ ತಪ್ಪು ಲೆಕ್ಕಗಳನ್ನು ತೋರಿಸಿದೆ. ಹೆಚ್ಚಿನ ಲಾಭ ಮಾಡುವ ದೃಷ್ಟಿಯಿಂದ ತಪ್ಪು ಲೆಕ್ಕಾಚಾರ ತೋರಿಸಿದ್ದು ಇದೇ ಕಾರಣಕ್ಕೆ ಈಗ ಸಂಸ್ಥೆಯ ಇಬ್ಬರೂ ಮಾಲೀಕರು ಜೈಲು ಸೇರಿದ್ದಾರೆ.