karnataka: ಭಾವುಕ ಕ್ಷಣಗಳ ಸೃಷ್ಟಿಸಿದ ನಿವೃತ್ತ ನೌಕರರ ಸನ್ಮಾನ

0
250
karnataka State Govt
Retirement

karnataka State Govt

ನಿವೃತ್ತಿಯೆಂಬುದು (Retirement) ಯಾವುದೇ ವೃತ್ತಿಪರ ವ್ಯಕ್ತಿಯ ಜೀವನದ ಅತ್ಯಂತ ಭಾವುಕ ಕ್ಷಣ. ನಾಲ್ಕು ದಶಕಗಳಿಂದಲೂ ಒಂದು ನಿರ್ದಿಷ್ಟ ಕಾರ್ಯದಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಸೇವೆ ಸಲ್ಲಿಸುತ್ತಾ, ಈಗ ಆ ಕಾರ್ಯಕ್ಕೆ ವಿದಾಯ ಹೇಳುವುದು ಸುಲಭದ ಕೆಲಸವಲ್ಲ. 40 ವರ್ಷಗಳಿಂದಲೂ ಪ್ರತಿದಿನವೂ ಮಾಡುತ್ತಾ ಬಂದ ಕಾರ್ಯವನ್ನು ಈಗ ಹಠಾತ್ತನೆ ನಿಲ್ಲಿಸಿಬಿಡಬೇಕೆಂಬುದು ಕೆಲಸವನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗದ ವಿಷಯ. ಈ ಕಹಿ ಗಳಿಗೆಯನ್ನು ತುಸು ಮೆದು ಗೊಳಿಸುವ ಕಾರಣದಿಂದ ನಿವೃತ್ತರಾದವರಿಗೆ ಸನ್ಮಾನಿಸುವ, ಅವರು ಇಷ್ಟು ವರ್ಷ ಸಲ್ಲಿಸಿದ ಸೇವೆಗೆ ಗೌರವ ನೀಡುವ ಕಾರ್ಯವನ್ನು ಕೆಲವು ಸಂಸ್ಥೆಗಳು ನಡೆಸಿಕೊಂಡು ಬಂದಿವೆ. ದೇವನಹಳ್ಳಿ (Devanahalli) ತಾಲ್ಲೂಕು ಕರ್ನಾಟಕ ಸರ್ಕಾರಿ ನೌಕರರ ಸಂಘ ಅವುಗಳಲ್ಲಿ ಒಂದು.

ಪ್ರತಿ ಮಾಸದಲ್ಲಿ ನಿವೃತ್ತರಾಗುವ ಆ ತಾಲ್ಲೂಕಿನ ಸರ್ಕಾರಿ ನೌಕರರನ್ನು ಸನ್ಮಾನಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದೇವನಹಳ್ಳಿ ಮಾಡುತ್ತಾ ಬಂದಿದ್ದು, ಈ ತಿಂಗಳು ನಿವೃತ್ತರಾದ ನಾರಾಯಣಪುರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹಾಗೂ ಕವಿ ಚಂದ್ರಶೇಖರ ಹಡಪದ, ಮುಖ್ಯಶಿಕ್ಷಕ ತಾಂಡವಮೂರ್ತಿ, ಸಹ ಶಿಕ್ಷಕರಾದ ಜಗದ, ಶಂಕರ್‌ ಇವರುಗಳ ಜೊತೆಗೆ ಚನ್ನರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ನೌಕರೆ ಶಾಂತಮ್ಮ ಅವರುಗಳಿಗೆ ಸನ್ಮಾನ ಮಾಡಲಾಯ್ತು.

ಚಂದ್ರಶೇಖರ್‌ ಮಾತನಾಡಿ, ವೃತ್ತಿಯ ಆರಂಭದ ದಿನಗಳಲ್ಲಿ ಎದುರಿಸಿದ ಸವಾಲುಗಳು. ಸರ್ಕಾರದೊಟ್ಟಿಗೆ ಮಾಡಿದ ಹೋರಾಟಗಳನ್ನು ನೆನಪು ಮಾಡಿಕೊಂಡರು. ಅದರ ಜೊತೆಗೆ ಶಿಕ್ಷಕ ವೃತ್ತಿ ಕೊಟ್ಟ ಸಾಮಾಜಿಕ ಗೌರವ, ಗಳಿಸಿಕೊಟ್ಟ ಅಪಾರ ಶಿಕ್ಷಕ ಮಿತ್ರರು ಹಾಗೂ ಅಸಂಖ್ಯ ವಿದ್ಯಾರ್ಥಿ ಬಳಗವನ್ನು ನೆನಪು ಮಾಡಿಕೊಂಡರು. ಶಿಕ್ಷಕನಾಗಿ ಕಲಿತ ಸಂವೇದನೆಗಳಿಂದಲೇ ತಾವು ಕವಿಯಾಗಿ ರೂಪುಗೊಂಡಿದ್ದಾಗಿಯೂ ಹೇಳಿದ ಚಂದ್ರಶೇಖರ್‌, ಶಿಕ್ಷಕನಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಲು ಸಹಕಾರ ನೀಡಿದ ಗೆಳೆಯರನ್ನು, ಬೆನ್ನೆಲುಬಾಗಿ ನಿಂತ ಶ್ರೀಮತಿ ರೇಣುಕಾ ಚಂದ್ರಶೇಖರ್‌ ಹಾಗೂ ಕುಟುಂಬಕ್ಕೆ ಧನ್ಯವಾದ ಸಲ್ಲಿಸಿದರು.

ಮುಖ್ಯಶಿಕ್ಷಕ ತಾಂಡವಮೂರ್ತಿ, ಸಹ ಶಿಕ್ಷಕರಾದ ಜಗದ, ಶಂಕರ್‌ ಅವರುಗಳು ಸಹ ತಮ್ಮ ಅನುಭವಗಳನ್ನು, ಶಿಕ್ಷಕರಾಗಿ ಸೇವೆ ಸಲ್ಲಿಸಲು ಇನ್ನೂ ಸ್ಪೂರ್ತಿ ಇರುವುದಾಗಿ ಹೇಳಿದರು. ಚನ್ನರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ನೌಕರೆ ಶಾಂತಮ್ಮ ಅವರಿಗೆ ಸನ್ಮಾನ ಮಾಡಿದ್ದು ಸಹ ವಿಶೇಷವಾಗಿತ್ತು. ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕರ್ಮಿಯಾಗಿ 1991 ರಲ್ಲಿ ವೃತ್ತಿಗೆ ಸೇರಿದ ಅವರು ಮೂರು ದಶಕದಿಂದ ಅಲ್ಲಿಯೇ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಅವರ ಸೇವಾಮನೋಭಾವವನ್ನು ಅವರೊಟ್ಟಿಗೆ ಕೆಲಸ ಮಾಡಿದ ಸಿಬ್ಬಂದಿ ವರ್ಗದವರು ಕೊಂಡಾಡಿದರು. ಚೆನ್ನರಾಯಪಟ್ಟಣ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿಗೂ ಅವರು ಮಾತೃಸ್ವರೂಪಿ ಎಂದು ಭಾವುಕರಾಗಿ ನುಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದೇವನಹಳ್ಳಿಯ ಗೌರವ ಅಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ಆದರ್ಶ, ಖಜಾಂಚಿ ಉಮಾಶಂಖರ್‌, ಉಪಾಧ್ಯಕ್ಷ ಗಂಗಾಧರ್‌, ಸಂಘಟನಾ ಕಾರ್ಯದರ್ಶಿ ಸೋಮಶೇಖರ್‌ ಇನ್ನಿತರೆ ಪದಾಧಿಕಾರಿಗಳು ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನ ಮಾಡಿದರು.

LEAVE A REPLY

Please enter your comment!
Please enter your name here