KS Eshwarappa: ಪಕ್ಷ ಕಟ್ಟಿದ ಈಶ್ವರಪ್ಪಗೆ ಬಿಜೆಪಿಯಿಂದ ಗೇಟ್​ಪಾಸ್, ಆರು ವರ್ಷ ನಿಷೇಧ

0
162
KS Eshwarappa

KS Eshwarappa

ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಮೊದಲಿಗರಲ್ಲಿ ಯಡಿಯೂರಪ್ಪ ಅವರ ಜೊತೆಗೆ ಕೇಳಿ ಬರುವ ಮತ್ತೊಂದು ಹೆಸರು ಕೆಎಸ್ ಈಶ್ವರಪ್ಪ ಅವರದ್ದು, ಆದರೆ ಈಗ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷ ಉಚ್ಛಾಟನೆ ಮಾಡಿದೆ. ಮುಂದಿನ ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಹೊರಗಿಟ್ಟಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆಂದು ಈಶ್ವರಪ್ಪಗೆ ಈ ಶಿಕ್ಷೆ ನೀಡಲಾಗಿದೆ. ಈಶ್ವರಪ್ಪ ಅವರು ಪಕ್ಷದ ‘ಆದೇಶ’ ಮೀರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧೆ ಮಾಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ಇನ್ನೂ ಕೆಲವರ ವಿರುದ್ಧ ಹೇಳಿಕೆಗಳನ್ನು ಸಹ ಈಶ್ವರಪ್ಪ ಮಾಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಉಚ್ಛಾಟನೆ ಶಿಕ್ಷೆ ನೀಡಲಾಗಿದೆ.

ಈಶ್ವರಪ್ಪ ತಮ್ಮ ಪುತ್ರ ಕೆಇ ಕಾಂತೇಶ್​ಗೆ ಹಾವೇರಿ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಪಕ್ಷವು ಟಿಕೆಟ್ ನೀಡಲಿಲ್ಲ. ಇದು ಈಶ್ವರಪ್ಪ ಅವರನ್ನು ಕೆರಳಿಸಿತ್ತು. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಮತ್ತೊಬ್ಬ ಪುತ್ರ ರಾಘವೇಂದ್ರಗೆ ಲೋಕಸಭೆ ಟಿಕೆಟ್ ನೀಡಲಾಗಿದೆ ಆದರೆ ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಣೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಯಡಿಯೂರಪ್ಪ ಅವರ ಮೊದಲ ಪುತ್ರ ರಾಘವೇಂದ್ರ ವಿರುದ್ಧವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ಮಾಡಿದ್ದು, ‘ಪಕ್ಷ ನೀಡಿದ ಆದೇಶವನ್ನು ಉಲ್ಲಂಘಿಸಿ, ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆ ಆಗಿದೆ. ಹಾಗಾಗಿ ನಿಮ್ಮನ್ನು ಪಕ್ಷದ ಎಲ್ಲ ಜವಾಬ್ದಾರಿ ಹಾಗೂ ಸ್ಥಾನಗಳಿಗೆ ವಜಾ ಮಾಡಲಾಗಿದ್ದು, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಮತ ಕೇಳಲು ಹೋಗಿ ಮಹಿಳೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ, ವಿಡಿಯೋ ವೈರಲ್

ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಕಟ್ಟಾಳುಗಳಲ್ಲಿ ಈಶ್ವರಪ್ಪ ಸಹ ಒಬ್ಬರು. ಯಡಿಯೂರಪ್ಪ ಅವರ ಬಲಗೈಯಾಗಿ ಹಲವು ದಶಗಳ ಕಾಲ ಶ್ರಮಪಟ್ಟು ಪಕ್ಷದ ಸಂಘಟನೆ ಮಾಡಿದ್ದರು. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರತಿನಿಧಿ ಎಂಬಂತಿದ್ದರೆ ಈಶ್ವರಪ್ಪ ಅಹಿಂದ ಸಮುದಾಯಗಳ ನಾಯಕ ಎನಿಸಿಕೊಂಡಿದ್ದರು. ಆದರೆ ಈಗ ಹಿರಿಯ ನಾಯಕನಿಗೆ ಬಿಜೆಪಿ ಗೇಟ್​ಪಾಸ್ ನೀಡಿದೆ.

ಶಿವಮೊಗ್ಗ ಲೋಕಸಭಾ ಚುನಾವಣಾ ಕಣದಲ್ಲಿರುವ ಈಶ್ವರಪ್ಪ, ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸಿ ಅಪ್ಪ (ಯಡಿಯೂರಪ್ಪ) ಮತ್ತು ಮಕ್ಕಳಿಗೆ ಬುದ್ಧಿಕಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ಕುಮಾರ್ ಕಣದಲ್ಲಿದ್ದು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಜಗಳದಿಂದ ಅವರಿಗೆ ಲಾಭವಾಗಲಿದೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here