KSRTC
ಕೆಎಸ್ಆರ್ಟಿಸಿ (KSRTC) ಬಸ್ಸಿನಿಂದ ಹೊರದಬ್ಬಿಸಿಕೊಂಡಿದ್ದ ಪ್ರಯಾಣಿಕನಿಗೆ ಗ್ರಾಹಕರ ವೇದಿಕೆಯಲ್ಲಿ ಭರ್ಜರಿ ಗೆಲುವು ಸಿಕ್ಕಿದೆ. 200 ರೂಪಾಯಿ ಕೊಡಲಿಲ್ಲವೆಂದು ನಿರ್ವಾಹಕನಿಂದ ಹೊರದಬ್ಬಿಸಿಕೊಂಡಿದ್ದ ಪ್ರಯಾಣಿಕನಿಗೆ ಇದೀಗ ಕೆಎಸ್ಆರ್ಟಿಸಿಯು 1 ಲಕ್ಷ ರೂಪಾಯಿ ಹಣ ನೀಡಬೇಕಿದೆ.
ಹತ್ತು ತಿಂಗಳ ಹಿಂದೆ ದೇವಸಿಗಾಮಣಿ ತಮಿಳುನಾಡಿನ ವಿಲ್ಲುಪುರಂನಿಂದ ತಮ್ಮ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಡನೆ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ನಿಯಮಾನುಸಾರ ಟಿಕೆಟ್ ಸಹ ಖರೀದಿ ಮಾಡಿದ್ದರು. ಆದರೆ ಅವರ ಬಳಿ ಮನೆಯಲ್ಲಿ ಮಾಡಿದ 15 ಲೀಟರ್ ಅಡುಗೆ ಎಣ್ಣೆ ಇತ್ತು. ಆ ಎಣ್ಣೆ ಬಾಟಲಿಗೆ ಪ್ರತ್ಯೇಕವಾಗಿ 200 ರೂಪಾಯಿ ಹಣ ಕೊಡಬೇಕು ಎಂದು ನಿರ್ವಾಹಕ ಜಗದೀಶ್ ಕೇಳಿದ್ದಾರೆ. ಆದರೆ ಹೆಚ್ಚುವರಿ ಹಣ ಕೊಡಲು ನಿರಾಕರಿಸಿದ ದೇವಸಿಗಾಮಣಿ ನಾನು 50 ರೂಪಾಯಿ ಮಾತ್ರವೇ ಕೊಡುತ್ತೀನಿ ಎಂದಿದ್ದಾರೆ.
ಭಾರತ ತೊರೆಯುವುದಾಗಿ ಹೇಳಿದ ವಾಟ್ಸ್ಆಪ್, ಕಾರಣವೇನು?
ಇದಕ್ಕೆ ಬಸ್ ನಿರ್ವಾಹಕ ದೇವಸಿಗಾಮಣಿ ಹಾಗೂ ಕುಟುಂಬವನ್ನು ನಡು ದಾರಿಯಲ್ಲಿ ಬಸ್ಸಿನಿಂದ ಇಳಿಯುವಂತೆ ಹೇಳಿದ್ದಾರೆ. ದೇವಸಿಗಾಮಣಿ ಹಾಗೂ ನಿರ್ವಾಹಕನ ನಡುವೆ ಇದೇ ವಿಷಯಕ್ಕೆ ಜಗಳ ನಡೆದು ಬಸ್ಸನ್ನು ತಮಿಳುನಾಡಿನ ಕಂದಾಚಿಪುರಂ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ಪೊಲೀಸರು ದೇವಸಿಗಾಮಣಿ ಪರವಾಗಿಯೇ ಮಾತನಾಡಿದ್ದಾರೆ. ಆದರೆ ನಿರ್ವಾಹಕ ಜಗದೀಶ್ ಬಸ್ಸಿನಲ್ಲಿದ್ದ ಇತರೆ ಸಹ ಪ್ರಯಾಣಿಕರ ಅಭಿಪ್ರಾಯ ಹಾಗೂ ತನ್ನ ಹಿರಿಯ ಅಧಿಕಾರಿಯ ಸಲಹೆ ಪಡೆದು ದೇವಸಿಗಾಮಣಿ ಹಾಗೂ ಕುಟುಂಬವನ್ನು ನಡುದಾರಿಯಲ್ಲಿಯೇ ಇಳಿಸಿ ಹೊರಟುಬಿಟ್ಟಿದ್ದಾರೆ. ಬಳಿಕ ದೇವಸಿಗಾಮಣಿ ಕಾರೊಂದನ್ನು ಮಾಡಿಕೊಂಡು ಕುಟುಂಬದೊಟ್ಟಿಗೆ ಬೆಂಗಳೂರು ತಲುಪಿದ್ದಾರೆ.
ಆದರೆ ತಮಗಾದ ಅನ್ಯಾಯದಿಂದ ಕುದ್ದು ಹೋಗಿದ್ದ ದೇವಸಿಗಾಮಣಿ ಗ್ರಾಹಕರ ವೇದಿಕೆಗೆ ಕೆಎಸ್ಆರ್ಟಿಸಿ ಸಂಸ್ಥೆ ವಿರುದ್ಧ ದಾವೆ ಹೂಡಿದ್ದರು. ಕೆಎಸ್ಆರ್ಟಿಸಿ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಕಡಲೆಕಾಯಿ ಎಣ್ಣೆ ಇಲ್ಲ. ಅಲ್ಲದೆ ಕಡಲೇ ಕಾಯಿ ಎಣ್ಣೆ ದಹಿಸುವ ವಸ್ತುವಲ್ಲ ಎಂದು ಮನದಟ್ಟು ಮಾಡಿದ್ದಲ್ಲದೆ, ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಕರನ್ನು ಮಧ್ಯದಲ್ಲಿ ಇಳಿಸಿದ್ದನ್ನು ಸಹ ನಿಯಮಬಾಹಿರವೆಂದು ತೀರ್ಮಾನಿಸಿ ದೇವಸಿಗಾಮಣಿಗೆ 1 ಲಕ್ಷ ರೂಪಾಯಿ ನಷ್ಟ ಪರಿಹಾರ ಹಾಗೂ ಟಿಕೆಟ್ ಹಣ 660 ರೂಪಾಯಿಗಳನ್ನು ಮರುಪಾವತಿಸಬೇಕು ಎಂದು ಆದೇಶಿಸಿದೆ.