Personal Finance
ವಾರೆನ್ ಬಫೆಟ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ನಮ್ಮ-ನಿಮ್ಮಂತೆ ಸಾಮಾನ್ಯ ವ್ಯಕ್ತಿಯಾಗಿದ್ದ ವಾರೆನ್ ಬಫೆಟ್ ಇಷ್ಟು ದೊಡ್ಡ ಶ್ರೀಮಂತರಾಗಿದ್ದು ಕೇವಲ ತಾಳ್ಮೆ, ಬುದ್ಧಿವಂತೆ ಹಾಗೂ ಕೆಲವು ಸರಳ ನಿಯಮಗಳನ್ನು ಪಾಲಿಸುವ ಮೂಲಕ. ಅತ್ಯಂತ ಶಿಸ್ತಿನ ಹೂಡಿಕೆದಾರರಾಗಿರುವ ವಾರೆನ್ ಬಫೆಟ್, ವಿಶ್ವದ ನಂಬರ್ 1 ಹೂಡಿಕೆದಾರ. ವಿಶ್ವದ ಅತ್ಯುತ್ತಮ ಕಂಪೆನಿಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ನೀವು ಶ್ರೀಮಂತರಾಗಬೇಕು ಎಂದರೆ ಈ 10 ಅಭ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ ಎಂದು ವಾರೆನ್ ಬಫೆಟ್ ಹೇಳಿದ್ದಾರೆ.
* ಉಳಿತಾಯಕ್ಕೆ ಮುಂಚೆ ಖರ್ಚು ಮಾಡಬೇಡಿ
ನಿಮಗೆ ತಿಂಗಳ ಸಂಬಳ ಬಂದಾಗ ಅಥವಾ ಯಾವುದೇ ಹಣ ಬಂದಾಗ ಮೊದಲು ಆ ಹಣದಲ್ಲಿ ಇಂತಿಷ್ಟು ಹಣವನ್ನು ಉಳಿತಾಯ ಮಾಡಿ, ಉಳಿತಾಯ ಮಾಡಿದ ನಂತರ ಉಳಿದ ಹಣವನ್ನು ಮಾತ್ರವೇ ಖರ್ಚು ಮಾಡಿ. ನೀವು ಉಳಿತಾಯ ಮಾಡದೆ ಖರ್ಚು ಮಾಡಲು ಮುಂದಾದರೆ ನೀವು ಎಂದಿಗೂ ಶ್ರೀಮಂತರಾಗಲಾರಿರಿ.
* ಆದಷ್ಟು ಬೇಗ ಹೂಡಿಕೆ ಆರಂಭಿಸಿ
ವಾರೆನ್ ಬಫೆಟ್ ಬಹಳ ಕಡಿಮೆ ವಯಸ್ಸಿಗೆ ಹೂಡಿಕೆ ಆರಂಭ ಮಾಡಿದ್ದರು. ಹಾಗಾಗಿ ಅವರು ಕೊಡುವ ಸಲಹೆ ಸಹ ಆದಷ್ಟು ಬೇಗ ಹೂಡಿಕೆ ಮಾಡಿ. ಉಳಿತಾಯ ಮಾಡಿದರೆ ಶ್ರೀಮಂತರಾಗಬಹುದು ಆದರೆ ತಡವಾಗಿ. ಅದೇ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣ ನಿಮಗಾಗಿ ದುಡಿಯುತ್ತದೆ.
* ಬ್ಯುಸಿನೆಸ್ ಮೇಲೆ ಹೂಡಿಕೆ ಮಾಡಿ
ಸ್ಟಾಕ್ ಮಾರ್ಟೆಕ್ ಎಂದರೆ ಬೇರೆಯವರ ಉದ್ಯಮದ ಮೇಲೆ ನೀವು ಹೂಡಿಕೆ ಮಾಡುವುದು. ವಾರೆನ್ ಬಫೆಟ್ ಪ್ರಕಾರ ಸ್ಟಾಕ್ ಮಾರ್ಕೆಟ್ ಬಹಳ ಒಳ್ಳೆಯ ಹೂಡಿಕೆ ಅವಕಾಶ ಏಕೆಂದರೆ ಬೇರೆಯವರು ಕಷ್ಟಪಟ್ಟು ಕಟ್ಟಿ ಬೆಳೆಸಿರುವ ಉದ್ಯಮದ ಮೇಲೆ ನೀವು ಹೂಡಿಕೆ ಮಾಡುತ್ತಿದ್ದೀರ. ಹಾಗಾಗಿ ಷೇರು ಮಾರುಕಟ್ಟೆಯ ಜ್ಞಾನ ಪಡೆದು, ಎಚ್ಚರಿಕೆಯಿಂದ ಹೂಡಿಕೆ ಮಾಡಿ.
* ಸ್ವಯಂ ಕಲಿಕೆ ನಿಲ್ಲಿಸದಿರಿ
ಸ್ವಯಂ ಕಲಿಕೆಯನ್ನು ನಿಲ್ಲಿಸಲೇ ಬೇಡಿ. ಎಷ್ಟೋ ಮಂದಿ ಒಂದು ವಯಸ್ಸಿನ ಬಳಿಕ ಕಲಿಕೆಯನ್ನು ನಿಲ್ಲಿಸಿಬಿಡುತ್ತಾರೆ. ಆದರೆ ವಾರೆನ್ ಬಫೆಟ್ ಹೇಳುವುದೆಂದರೆ ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ. ಕಲಿಕೆ ನಿಲ್ಲಿಸಿದರೆಂದರೆ ಹೊಸ ವಿಷಯಗಳ ಬಗ್ಗೆ ಆಸಕ್ತಿ ಹೊರಟು ಹೋಗುತ್ತದೆ.
* ಕಣ್ಣು ಮುಚ್ಚಿ ಹೂಡಿಕೆಮಾಡುವುದು
ಮಾಹಿತಿ ಇಲ್ಲದೆ ಯಾರದ್ದೋ ಸುಳ್ಳು ಮಾತು ನಂಬಿ ಯಾವುದೇ ಉದ್ಯಮ, ವಸ್ತುಗಳ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಅಪಾಯಕಾರಿ. ಇದರಿಂದ ನೀವು ಉಳಿಸಿದ ಹಣವನ್ನೆಲ್ಲ ಒಂದೇ ಬಾರಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದಯವಿಟ್ಟು ಪರಾಮರ್ಶೆ ಮಾಡದೆ ಹೂಡಿಕೆ ಮಾಡಲೇ ಬೇಡಿ.
* ಅತಿಯಾದ ಸಾಲ
ಅತಿಯಾದ ಸಾಲ ಯಾವ ವ್ಯಕ್ತಿಗೂ ಸೂಕ್ತವಲ್ಲ. ಒಂದು ನಿಯಮಿತ ಹಂತದ ಸಾಲವನ್ನು ಒಪ್ಪಿಕೊಳ್ಳಬಹುದು, ಆದರೆ ಅತಿಯಾದ ಸಾಲ ವ್ಯಕ್ತಿಯನ್ನು ಶೂಲಕ್ಕೆ ಏರಿಸುತ್ತದೆ. ಸಾಲದಿಂದ ದೂರವೇ ಇರಿ. ಒಂದೊಮ್ಮೆ ಅತ್ಯಂತ ಕಡಿಮೆ, ಅಥವಾ ಬಡ್ಡಿ ರಹಿತ ಸಾಲ ಸಿಗುವುದಾದರೆ ಮಾತ್ರವೇ ತೆಗೆದುಕೊಂಡು ಆ ಹಣವನ್ನು ಹೂಡಿಕೆ ಮಾಡಿ.
* ಶೀಘ್ರ ಹಣ ಗಳಿಸುವ ದಾರಿಗಳನ್ನು ಹಿಡಿಯಬೇಡಿ
ಮಾರುಕಟ್ಟೆಯಲ್ಲಿ 90 ದಿನಕ್ಕೆ ಹಣ ಡಬಲ್, ಒಂದು ವರ್ಷಕ್ಕೆ ಹಣ ಡಬಲ್ ಅಂಥಹಾ ಸಾಕಷ್ಟು ಸ್ಕೀಮ್ಗಳು ಜಾರಿಯಲ್ಲಿವೆ. ಆದರೆ ದಯವಿಟ್ಟು ಅಂಥಹಾ ಯಾವುದೇ ಯೋಜನೆಗಳ ಮೇಲೆ ಹೂಡಿಕೆ ಮಾಡಬೇಡಿ. ಹಣ ಡಬಲ್ ಆಗುತ್ತಿದೆ ಎಂದರೆ ಅಲ್ಲಿ ನಿಯಮ ಮುರಿಯಲಾಗುತ್ತಿದೆ ಎಂದೇ ಅರ್ಥ. ಎಚ್ಚರಿಕೆಯಿಂದ ಇರಿ.
* ಟ್ರೇಡಿಂಗ್ ಮಾಡುವುದು ಸೂಕ್ತವಲ್ಲ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಟ್ರೇಡಿಂಗ್ ಎಂಬ ಎರಡು ವಿಧಾನಗಳಿವೆ. ಹೂಡಿಕೆ ಸೂಕ್ತ ವಿಧಾನ ಆದರೆ ಟ್ರೇಡಿಂಗ್ ಸಾಮಾನ್ಯ ಹೂಡಿಕೆದಾರರಿಗೆ ಅಲ್ಲ. ಟ್ರೇಡಿಂಗ್ ನಿಂದ ದೂರ ಇದ್ದಷ್ಟು ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.
* ತಾಳ್ಮೆ ಕಳೆದುಕೊಳ್ಳಬೇಡಿ
ಯಾವುದೇ ಹೂಡಿಕೆ ಹಣ ಮಾಡಿಕೊಡಲು ಸಮಯ ತೆಗೆದುಕೊಳ್ಳುತ್ತದೆ. ಮರವೊಂದರಿಂದ ನೆರಳು ಬರಬೇಕೆಂದರೆ ವರ್ಷಗಳ ಗಟ್ಟಲೆ ಕಾಯಬೇಕು. ಇದು ಸಹ ಹಾಗೆಯೇ, ಇಂದು ಹೂಡಿಕೆ ಮಾಡಿ ನಾಳೆ ಲಾಭ ಕೇಳಿದರೆ ಆಗದು, ತಾಳ್ಮೆ ಇರಬೇಕು.
Business: 8 ಲಕ್ಷ ಹಣ ಹೂಡಿಕೆ ಮಾಡಿ, ಸಾವಿರಾರು ಕೋಟಿ ದುಡಿದ ಬಿಪಿನ್, ಯಾರೀತ?
* ಅತಿಯಾದ ಹೂಡಿಕೆ ಅಪಾಯಕಾರಿ
ನಿಮ್ಮ ಹಣದ ಇಳಹರಿವೆಗೆ ತಕ್ಕಂತೆ ಹೂಡಿಕೆ ಮಾಡಿಕೊಳ್ಳಿ, ಅತಿಯಾಗಿ ಹೂಡಿಕೆ ಮಾಡುವುದು ಅಪಾಯಕಾರಿ, ಹಣದ ಒಳಹರಿವು ಕಡಿಮೆ ಆದಾಗ ಯಾವ ಹೂಡಿಕೆಯನ್ನು ನೀವು ಮುಂದುವರೆಸಲು ಆಗುವುದಿಲ್ಲ. ಅತಿಯಾಗಿ ಹೂಡಿಕೆ ಮಾಡಿದಾಗ ಅವುಗಳ ಲೆಕ್ಕ ಇಡುವುದು ಸಹ ಕಷ್ಟವಾಗುತ್ತದೆ.