Prajwal Revanna
ಅತ್ಯಾಚಾರ, ಬೆದರಿಕೆ ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಹಲವು ನೊಟೀಸ್, ರೆಡ್ ಕಾರ್ನರ್ ನೋಟೀಸ್‌ಗಳ ಬಳಿಕ ಸುಮಾರು ಒಂದು ತಿಂಗಳ ಬಳಿಕ ನಿನ್ನೆ ಅಂದರೆ ಮೇ 30ರ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾದರು. ಅವರನ್ನು ವಿಮಾನ ನಿಲ್ದಾಣದಲ್ಲಿಯೇ ವಿಶೇಷ ತನಿಖಾ ದಳದ ಸದಸ್ಯರು ಬಂಧಿಸಿದರು. ವಿಶೇಷವೆಂದರೆ ಎಸ್‌ಐಟಿಯ ಮಹಿಳಾ ಸದಸ್ಯರೇ ಕಾರ್ಯಾಚರಣೆಯ ಮುಂದಾಳತ್ವ ವಹಿಸಿ ಪ್ರಜ್ವಲ್‌ನನ್ನು ವಶಕ್ಕೆ ಪಡೆದಿದ್ದು ವಿಶೇಷವಾಗಿತ್ತು.
ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬರುವುದು ಎಸ್‌ಐಟಿಗೆ ಮೊದಲೇ ಖಾತ್ರಿಯಾಗಿತ್ತು. ಪ್ರಜ್ವಲ್ ಲುಫ್ತಾನ್ಸಾ ಏರ್‌ಲೈನ್ಸ್ ಏರ್‌ಲೈನ್ಸ್ LH 764 ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನ ಟಿಕೆಟ್ ಬುಕ್ ಮಾಡಿದ್ದರು. ಆ ವಿಮಾನ ಮಧ್ಯರಾತ್ರಿ ೧೨:೪೦ ಕ್ಕೆ ಬೆಂಗಳೂರು ತಲುಪುವುದು ನಿಗದಿಯಾಗಿತ್ತು. ಹಾಗಾಗಿ ಬೆಂಗಳೂರು ಪೊಲೀಸರು, ವಿಮಾನ ನಿಲ್ದಾಣ ಪೊಲೀಸರು, ಎಸ್‌ಐಟಿ ಅವರುಗಳು ರಾತ್ರಿ ೧೦ ಗಂಟೆಯಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಜ್ವಲ್ ರೇವಣ್ಣ ಆಗಮನಕ್ಕೆ ಕಾಯತೊಡಗಿದರು.
ಈ ಮಧ್ಯೆ ಯುವ ಕಾಂಗ್ರೆಸ್ ಸದಸ್ಯರು ಪ್ರಜ್ವಲ್ ರೇವಣ್ಣಗೆ ಮುತ್ತಿಗೆ ಹಾಕಲು ನಿರ್ಧರಿಸಿರುವ ಸುದ್ದಿಗಳು ಸಹ ಹರಿದಾಡಿದವು. ವಿಮಾನ ನಿಲ್ದಾಣದ ಟೋಲ್ ಗೇಟ್ ಬಳಿ ಯುವ ಕಾಂಗ್ರೆಸ್ ಸದಸ್ಯರು ಪ್ರಜ್ವಲ್ ರೇವಣ್ಣಗೆ ಮುತ್ತಿಗೆ ಹಾಕಲಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಏರ್ಪೋರ್ಟ್ ಹಾಗೂ ಅದರ ಟೋಲ್ ಗೇಟ್ ಬಳಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪ್ರಜ್ವಲ್ ಬರುತ್ತಿದ್ದ ವಿಮಾನ ನಿಗದಿತ ಸಮಯಕ್ಕಿಂತಲೂ ತುಸು ತಡವಾಗಿ ಅಂದರೆ ಸುಮಾರು 1:20ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಮೊದಲೇ ವಿಮಾನ ನಿಲ್ದಾಣದ ಒಳಗೆ ಇದ್ದ ಎಸ್‌ಐಟಿ ವಿಶೇಷ ತಂಡದ ಸದಸ್ಯರು. ಪ್ರಜ್ವಲ್‌ರ ಇಮಿಗ್ರೇಶನ್ ಪ್ರಕ್ರಿಯೆ ಮುಗಿದ ಬಳಿಕ ವಶಕ್ಕೆ ಪಡೆದರು. ಪ್ರಜ್ವಲ್ ಅನ್ನು ವಶಕ್ಕೆ ಪಡೆದು, ಮಾಧ್ಯಮಗಳ ಕಣ್ತಪ್ಪಿಸಿ ವಿಮಾನ ನಿಲ್ದಾಣದ ಹಿಂದಿನ ಗೇಟ್ ನಿಂದ ಪ್ರಜ್ವಲ್ ರನ್ನು ಕರೆದೊಯ್ಯಲಾಯ್ತು. ನೇರವಾಗಿ ಸಿಸಿಡಿ ಕಚೇರಿಗೆ ಪ್ರಜ್ವಲ್‌ನನ್ನು ಕರೆತಂದ ಎಸ್‌ಐಟಿ ಸದಸ್ಯರು. ಪ್ರಜ್ವಲ್‌ಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿದ್ದರು. ಇಡೀ ರಾತ್ರಿಯನ್ನು ಪ್ರಜ್ವಲ್ ಅಲ್ಲಿಯೇ ಕಳೆದರು. ಪ್ರಜ್ವಲ್‌ರ ಮೊಬೈಲ್, ಲಗೇಜು ಎಲ್ಲವನ್ನೂ ಎಸ್‌ಐಟಿ ತನ್ನ ವಶಕ್ಕೆ ತೆಗೆದುಕೊಂಡಿತು.
Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?
ಇಂದು (ಮೇ 31) ಬೆಳಿಗ್ಗೆ ಪ್ರಜ್ವಲ್‌ನನ್ನು ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆ ಬಳಿ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಪ್ರಜ್ವಲ್ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.