Puneeth Kerehallia
ಈ ಹಿಂದೆ ಮುಸ್ಲೀಂ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುನೀತ್ ಕೆರೆಹಳ್ಳಿಯನ್ನು ಕಾಟನ್ಪೇಟೆ-ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಯಿಮಾಂಸ ತರಿಸಲಾಗುತ್ತಿದೆ ಎಂದು ಆರೋಪ ಮಾಡಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪುನೀತ್ ಅನ್ನು ನಿನ್ನೆ (ಜುಲೈ 26) ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆವ ಮುನ್ನ ಸ್ಥಳದಲ್ಲಿ ನಾಯಿ ಮಾಂಸದ ಕುರಿತು ಸಾಕಷ್ಟು ಹೈಡ್ರಾಮಾ ನಡೆದಿದೆ.
ರೈಲಿನ ಮೂಲಕ ನಾಯಿ ಮಾಂಸವನ್ನು ತರಿಸಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಹಾಗೂ ಕೆಲವರು ನಗರದ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಆರಂಭಿಸಿದರು. ರೈಲಿನ ಮೂಲಕ ಪೆಟ್ಟಿಗೆಗಳಲ್ಲಿ ನಾಯಿ ಮಾಂಸವನ್ನು ತರಿಸಲಾಗುತ್ತಿದ್ದು ಅದು ಅಬ್ದುಲ್ ರಜಾಕ್ ಹೆಸರಿನ ವ್ಯಕ್ತಿಯ ಅಂಗಡಿಯನ್ನು ಸೇರುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ಆರೋಪ ಮಾಡಿದರು.
ಬಳಿಕ ಸ್ಥಳಕ್ಕೆ ಅಬ್ದುಲ್ ರಜಾಕ್ ಆಗಮಿಸಿದರು. ಆಗ ಎರಡು ಗುಂಪುಗಳ ನಡುವೆ ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಅದೇ ವೇಳೆಗೆ ಸ್ಥಳಕ್ಕೆ ಕಾಟನ್ಪೇಟೆ ಮತ್ತು ಉಪ್ಪಾರಪೇಟೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ಮಾಡಿದರು. ಕೊನೆಗೆ ಸ್ಥಳಕ್ಕೆ ಬಂದ ವೈದ್ಯಾಧಿಕಾರಿಗಳು ಮಾಂಸದ ಮಾದರಿಯನ್ನು ತೆಗೆದುಕೊಂಡು ಪರಿಶೀಲನೆಗೆ ಕಳಿಸಿದರು. ವರದಿ ಬಂದ ಬಳಿಕ ಅದು ಕುರಿ ಮಾಂಸವೇ ಅಥವಾ ನಾಯಿ ಮಾಂಸವೇ ತಿಳಿಯಲಿದೆ ಎಂದರು.
Andhra Pradesh: ಆಂಧ್ರದ ಜನರಿಗೆ ಕೊನೆಗೂ ಸಿಕ್ತು ‘ಎಣ್ಣೆ ಭಾಗ್ಯ’
ಈ ನಡುವೆ ಪೊಲೀಸರ ಮುಂದೆ ಆರೋಪ ಮಾಡಿದ ಅಬ್ದುಲ್ ರಜಾಕ್, ಕೆಲವು ದಿನಗಳ ಹಿಂದೆ ಪುನೀತ್ ಕೆರೆಹಳ್ಳಿ ನನ್ನ ಬಳಿ ಬಂದಿದ್ದ, ಹಫ್ತಾ ಹಣ ನೀಡುವಂತೆ ಒತ್ತಾಯ ಮಾಡಿದ. ನಾನು ಕೊಡುವುದಿಲ್ಲ ಎಂದಿದ್ದೆ ಅದಕ್ಕೆ ಈಗ ಸುಳ್ಳು ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾನೆ ಎಂದಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ರಾತ್ರಿ 12 ಗಂಟೆ ವೇಳೆ ಪೊಲೀಸರು ವಶಕ್ಕೆ ಪಡೆದರು. ಬಳಿಕ ಕರೆದುಕೊಂಡು ಹೋಗಿ ಜೈಲಿನಲ್ಲಿ ಇರಿಸಿದ್ದಾಗ ಬೆಳಿಗಿನ ಜಾವ ಪುನೀತ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಈ ಹಿಂದೆಯೂ ಕೆಲವು ಆರೋಪಗಳು ಕೇಳಿ ಬಂದಿವೆ. ಪುನೀತ್ ಕೆರೆಹಳ್ಳಿ, ವೇಶ್ಯಾವಾಟಿಕೆಯಲ್ಲಿ ಬಂಧಿತರಾಗಿದ್ದು, ಈಗಲೂ ಪ್ರಕರಣ ಚಾಲ್ತಿಯಲ್ಲಿದೆ. ಹಫ್ತಾ ವಸೂಲಿ ಆರೋಪ, ಕೊಲೆ ಪ್ರಕರಣವೊಂದು ಸಹ ಪುನೀತ್ ವಿರುದ್ಧ ನಡೆಯುತ್ತಿದೆ. ಇತ್ತೀಚೆಗೆ ಕೆಲ ವರ್ಷಗಳಿಂದ ಹಿಂದೂಪರ ಹೋರಾಟಗಾರರಾಗಿ ಪುನೀತ್ ಗುರುತಿಸಿಕೊಂಡಿದ್ದಾರೆ.