Site icon Samastha News

Refex Group: ಬೆಂಗಳೂರು ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಕಡಿಮೆ ಮೊತ್ತದ ಇವಿ ಟ್ಯಾಕ್ಸಿ ಸೇವೆ ಆರಂಭ

Refex Group

Refex Group

ಬೆಂಗಳೂರು (Bengaluru) ನಗರದಿಂದ ಬಹು ದೂರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುದು ದೊಡ್ಡ ಸಾಹಸವೇ ಸರಿ. ಇದು ಮಾತ್ರವಲ್ಲ ಎಷ್ಟೋ ಬಾರಿ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಟ್ಯಾಕ್ಸಿಗೆ ಕೊಡುವ ಹಣ, ವಿಮಾನದಲ್ಲಿ ಹೈದರಾಬಾದ್, ಚೆನ್ನೈ, ಮೈಸೂರಿಗೆ ಪ್ರಯಾಣಿಸಲು ಖರೀದಿಸಿದ ಟಿಕೆಟ್ ಹಣದ ಮೊತ್ತ ಒಂದೇ ಆಗಿದ್ದಿದೆ. ಕೆಲವೊಮ್ಮೆ ವಿಮಾನ ಟಿಕೆಟ್ ದರಕ್ಕಿಂತಲೂ ದುಬಾರಿ ಟ್ಯಾಕ್ಸಿ ಬಿಲ್ ಆಗಿದ್ದೂ ಇದೆ. ಇದಕ್ಕೆಲ್ಲ ಬ್ರೇಕ್ ಹಾಕಲು‌ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದೆ ಇ ಟ್ಯಾಕ್ಸಿ.

ರೆಫೆಕ್ಸ್ ಗ್ರೂಪ್ ಸಂಸ್ಥೆಯು, ಗ್ರೀನ್ ಮೊಬಿಲಿಟಿ ವರ್ಟಿಕಲ್ ಅಡಿಯಲ್ಲಿ ರೆಫೆಕ್ಸ್ ಇವೀಲ್ಜ್ (Refex eVeelz) ಹೆಸರಿನಲ್ಲಿ ಬ್ಯಾಟರಿ ಚಾಲಿತ ಟ್ಯಾಕ್ಸಿ ಸೇವೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭಿಸಿದೆ.

ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ ರವಿ, ರೆಫೆಕ್ಸ್ ಗ್ರೂಪ್ ನ ಸಿಇಓ ಹರಿ ಮರರ್ ಹಾಗೂ ಇತರೆ ಕೆಲವು ಪ್ರಮುಖರು ಪರೊಸರ ದಿನಾಚರಣೆಯಂದು ಈ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಕಾರುಗಳನ್ನು ಲೋಕಾರ್ಪಣೆಗೊಳಿಸಿದರು. ಮೊದಲ ಹಂತವಾಗಿ 175 ಮಿನಿ‌ ಎಸ್ಯುವಿ ಮಾದರಿಯ ಕಾರುಗಳ ಮೂಲಕ ಟ್ಯಾಕ್ಸಿ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗಲಿದೆ.

ಬೆಂಗಳೂರಿನಲ್ಲಿ ಓಡಾಡಿತು ಚಾಲಕನಿಲ್ಲದ ಕಾರು, ಏನಿದರ ಅಸಲೀಯತ್ತು?

ಪ್ರಯಾಣಿಕರು, ಬೆಂಗಳೂರು‌ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ ಮೂಲಕ ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು. ಅಲ್ಲದೆ BLR pulse ಮೊಬೈಲ್ ಅಪ್ಲಿಕೇಶನ್ ಮೂಲಕ ಸಹ ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು. ರೆಫೆಕ್ಸ್, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಪಿಂಲ್ ಟ್ಯಾಕ್ಸಿಗಳನ್ನು ಸಹ ಬಿಡುಗಡೆ ಮಾಡಿದ್ದು, ಪಿಂಕ್ ಟ್ಯಾಕ್ಸಿಯನ್ನು ಮಹಿಳೆಯರೇ ಚಲಾಯಿಸುತ್ತಾರೆ. ಅಲ್ಲದೆ ಪಿಂಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಪಿಂಕ್ ಕಾರ್ಡ್ ನೀಡಲಾಗುತ್ತಿದ್ದು, ಈ ಕಾರ್ಡ್ ನಲ್ಲಿ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೊಲೀಸ್ ಹಾಗೂ ಆಂಬುಲೆನ್ಸ್ ಸಂಖ್ಯೆ ಇರಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಪ್ರಸ್ತುತ ವಿಮಾನ ನಿಲ್ದಾಣದಲ್ಲಿ  ಸೇವೆ ಒದಗಿಸುತ್ತಿರುವ ಟ್ಯಾಕ್ಸಿ ಸಂಸ್ಥೆಗಳ ಹೋಲಿಕೆಯಲ್ಲಿ ಕಡಿಮೆ ಮೊತ್ತಕ್ಕೆ ರೆಫೆಕ್ಸ್ ಸಂಸ್ಥೆ ಟ್ಯಾಕ್ಸಿ ಸೇವೆ ಒದಗಿಸಲಿದೆ ಎಂದು ಕಂಪೆನಿ ಹೇಳಿದೆ.

Exit mobile version