Narendra Modi
ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಏಪ್ರಿಲ್ 14 ರಂದು ರಾಜ್ಯಕ್ಕೆ ಬರಲಿದ್ದಾರೆ. ಸಿದ್ದರಾಮಯ್ಯ ಅವರ ತವರಾದ ಮೈಸೂರಿನಲ್ಲಿ ಎನ್ಡಿಎ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಅದಾದ ಬಳಿಕ ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ಮೋದಿ ಕರ್ನಾಟಕಕ್ಕೆ ಬರುತ್ತಿದ್ದು, ರಾಜ್ಯಕ್ಕೆ ಬರುತ್ತಿರುವ ಪ್ರಧಾನಿಗಳಿಗೆ ಕಾಂಗ್ರೆಸ್ ಸಚಿವ ಕೃಷ್ಣಭೈರೇಗೌಡ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ನಾಳಿನ (ಏಪ್ರಿಲ್ 14) ರ ಕಾರ್ಯಕ್ರಮದಲ್ಲಿ ಉತ್ತರಿಸುವಂತೆ ಸವಾಲು ಎಸೆದಿದ್ದಾರೆ.
ಎಎನ್ಐ ಜೊತೆ ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ, ‘ಪ್ರತಿ ಬಾರಿ ಚುನಾವಣೆ ಬಂದಾಗ ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬರುತ್ತಾರೆ. ಬಂದಾಗ ರಾಜ್ಯದ ಜನರ ಮತ ತೆಗೆದುಕೊಂಡು ಹೋಗುತ್ತಾರೆ. ಅದೇ ರೀತಿ ಕೇಂದ್ರ ಸರ್ಕಾರ ಭಾರಿ ದೊಡ್ಡ ಮೊತ್ತದ ತೆರಿಗೆಯನ್ನು ರಾಜ್ಯದಿಂದ ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕಕ್ಕೆ, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮೊತ್ತದ ತೆರಿಗೆ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಈ ತಾರತಮ್ಯ ಏಕೆ ಎಂದು ಮೋದಿಯವರು ಉತ್ತರಿಸಬೇಕಿದೆ’ ಎಂದಿದ್ದಾರೆ.
ಮತ ಕೇಳಲು ಹೋಗಿ ಮಹಿಳೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ, ವಿಡಿಯೋ ವೈರಲ್
ಮುಂದುವರೆದು, ‘ಕಳೆದ ವರ್ಷ ಕೇಂದ್ರ ಬಜೆಟ್ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ರೂಪಾಯಿ ನೆರವನ್ನು ಘೋಷಿಸಲಾಗಿತ್ತು. ,ಕರ್ನಾಟಕ ರಾಜ್ಯದ ಮಧ್ಯ ಭಾಗದ ಬರಪೀಡಿದ ಜಿಲ್ಲೆಗಳಿಗೆ ನೀರು ಒದಗಿಸುವುದು ಅಪ್ಪರ್ ಭದ್ರಾ ಯೋಜನೆಯ ಉದ್ದೇಶವಾಗಿತ್ತು. ಕೇಂದ್ರದ ಆ ಬಜೆಟ್ಗೆ ಸಂಸದರ ಒಪ್ಪಿಗೆ ಸಹ ದೊರಕಿತು. ಆದರೂ ಈವರೆಗೆ ಏಕೆ ಹಣವನ್ನು ಬಿಡುಗಡೆ ಮಾಡಿಲ್ಲ?’ ಎಂದು ಎರಡನೇ ಪ್ರಶ್ನೆಯನ್ನು ಕೇಳಿದ್ದಾರೆ.
ಕರ್ನಾಟಕ ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ರಾಜ್ಯದ 240 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿವೆ. ಕಾನೂನಿನ ಅನ್ವಯ ರಾಜ್ಯದ ರೈತರಿಗೆ 2023ರ ನವೆಂಬರ್‌ನಲ್ಲೇ ಬರ ಪರಿಹಾರದ ಮೊತ್ತ ದೊರಕಬೇಕಿತ್ತು. ಆದರೆ, 2024ರ ಏಪ್ರಿಲ್ ತಿಂಗಳು ಬಂದಿದೆ. ಎನ್‌ಡಿಆರ್‌ಎಫ್ ನಿಧಿಯಿಂದ ರಾಜ್ಯದ ರೈತರಿಗೆ ಒಂದು ರೂಪಾಯಿ ಹಣ ಸಹ ಈವರೆಗೆ ದೊರೆತಿಲ್ಲ. ಕರ್ನಾಟಕ ರೈತರಿಗೆ ಯಾಕೆ ಈ ಅನ್ಯಾಯ? ನಿಮಗೆ ಕರ್ನಾಟಕದ ಜನರ ಮತ ಬೇಕು ಆದರೆ ಕರ್ನಾಟಕದ ಜನರ ಕಷ್ಟ ಬೇಡ ಏಕೆ?’ ಎಂದು ಕೇಳಿದ್ದಾರೆ ಸಚಿವ ಕೃಷ್ಣಭೈರೇಗೌಡ.
ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 14) ಸಂಜೆ ಭೂಪಾಲದಿಂದ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನ ಅರಮನೆ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಎನ್ಡಿಎ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಅದಾದ ಬಳಿಕ ಮಂಗಳೂರಿಗೆ ತೆರಳಿ ನಾರಾಯಣಗುರು ವೃತ್ತದಲ್ಲಿ ನಾರಾಯಣಗುರುಗಳ ಪ್ರತಿಮೆಗೆ ಹಾರ ಹಾಕುವ ಮೂಲಕ ರೋಡ್ ಶೋಗೆ ಚಾಲನೆ ನೀಡಲಿದ್ದಾರೆ. ಮಹಾನಗರ ಪಾಲಿಕೆ, ಬಲ್ಲಾಳ ಬಾಗ್, ಎಂ.ಜಿ.ರಸ್ತೆ, ಪಿವಿಎಸ್ ವೃತ್ತ, ರಾಷ್ಟ್ರಕವಿ ಗೋವಿಂದ ಪೈ ವೃತ್ತದ ವರೆಗೆ ರೋಡ್ ಶೋ ಸಾಗಲಿದೆ. ರಾತ್ರಿ 8:30ಕ್ಕೆ ರೋಡ್ ಶೋ ಮುಗಿಯಲಿದೆ.
[…] ಕರ್ನಾಟಕಕ್ಕೆ ಬರಲಿರುವ ಮೋದಿಗೆ ಸಚಿವ ಕೃಷ್… […]