Shiva Rajkuma
ಶಿವರಾಜ್ ಕುಮಾರ್ (Shiva Rajkumar) ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದ ಟಾಪ್ ನಟ. ಹಲವು ಸ್ಟಾರ್ ನಟರುಗಳು ವರ್ಷಕ್ಕೆ ಒಂದು, ಎರಡು ವರ್ಷಕ್ಕೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಶಿವಣ್ಣ ಮಾತ್ರ ವರ್ಷಕ್ಕೆ ನಾಲ್ಕು ಐದು ಸಿನಿಮಾಗಳಲ್ಲಿ ನಟಿಸುತ್ತಾರೆ. ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಾರೆ. ಇನ್ನು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಮಾಜ ಸೇವಕಿ ಆಗಿರುವ ಜೊತೆಗೆ ಸಿನಿಮಾ ನಿರ್ಮಾಪಕಿಯೂ ಆಗಿದ್ದಾರೆ. ಈ ಇಬ್ಬರೂ ಸ್ಯಾಂಡಲ್ವುಡ್ನ ಆದರ್ಶ ದಂಪತಿ. ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಟ ಶಿವರಾಜ್ ಕುಮಾರ್, ಪತ್ನಿಯ ಪರ ನಿಂತು ಶಿವಮೊಗ್ಗದಾದ್ಯಂತ ಸಂಚರಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು (ಏಪ್ರಿಲ್ 15) ಗೀತಾ ಶಿವರಾಜ್ ಕುಮಾರ್ ಅವರು ಚುನಾವಣಾ ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್ನಲ್ಲಿ ತಮ್ಮ ಹಾಗೂ ಪತಿ ಶಿವರಾಜ್ ಕುಮಾರ್ ಅವರ ಆಸ್ತಿ ವಿವರ, ಆದಾಯಗಳ ಮಾಹಿತಿಯನ್ನು ಸಲ್ಲಿಸಿದ್ದಾರೆ.
ಕಳೆದ ಹಣಕಾಸಿನ ವರ್ಷ (2023 ಮಾರ್ಚ್ 31) ರಲ್ಲಿ ಗೀತಾ ಶಿವರಾಜ್ಕುಮಾರ್ ಆದಾಯ 1.48 ಕೋಟಿ, ಅದೇ ವರ್ಷ ಶಿವಣ್ಣನ ಆದಾಯ 2.97 ಕೋಟಿ ರೂಪಾಯಿಗಳು. ಗೀತಾ ಬಳಿ 3 ಲಕ್ಷ ನಗದು ಇದ್ದರೆ, ಶಿವಣ್ಣನ ಬಳಿ 22.58 ಲಕ್ಷ ನಗದು ಇದೆ. ಗೀತಾ ಅವರ ಬ್ಯಾಂಕ್ ಖಾತೆಗಳಲ್ಲಿ ಸರಿ ಸುಮಾರು 64 ಲಕ್ಷ ರೂಪಾಯಿ ಹಣ ಇದೆ. ಅದೇ ಶಿವಣ್ಣನ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 4.80 ಕೋಟಿ ರೂಪಾಯಿ ಹಣ ಇದೆ. ಗೀತಾ ಅವರು ಮುತ್ತು ಸಿನಿ ಸರ್ವಿಸ್ಗೆ 24 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರೆ, ಶಿವಣ್ಣ, ಪತ್ನಿ ಗೀತಾ ಶಿವರಾಜ್ಕುಮಾರ್ ಅವರ ನಿರ್ಮಾಣ ಸಂಸ್ಥೆಗೆ 6 ಕೋಟಿ ಸಾಲ ನೀಡಿದ್ದಾರೆ. ಅದರ ಜೊತೆಗೆ ಧ್ರುವ ಕುಮಾರ್ ಎಂಬುವರಿಗೆ 2.13 ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾರೆ. ಮುತ್ತು ಸಿನಿ ಸರ್ವೀಸ್ಗೆ 1.64 ಕೋಟಿ ಸಾಲ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಆಸ್ತಿ ಎಷ್ಟು ಕೋಟಿ, ಎಲ್ಲಿಂದ ಬರುತ್ತಿದೆ ಆದಾಯ? ಹೂಡಿಕೆ ಮಾಡಿದ್ದು ಎಲ್ಲೆಲ್ಲಿ?
ಶಿವಣ್ಣನ ಹೆಸರಲ್ಲಿ ಮೂರು ಕಾರುಗಳಿವೆ, ಮೂರು ಕಾರುಗಳ ಒಟ್ಟು ಮೌಲ್ಯ 87.50 ಲಕ್ಷ ರೂಪಾಯಿ. ಗೀತಕ್ಕನ ಹೆಸರಲ್ಲಿ ಇರುವುದು ಒಂದೇ ಕಾರು ಆದರೆ ಅದರ ಮೌಲ್ಯ 1.07 ಕೋಟಿ ರೂಪಾಯಿಗಳು. ಶಿವಣ್ಣನ ಬಳಿ ಯಾವುದೇ ಆಭರಣಗಳು ಇಲ್ಲ. ಗೀತಕ್ಕನ ಬಳಿ 3.53 ಕೋಟಿ ಮೌಲ್ಯದ ಆಭರಣಗಳಿವೆ. ಒಟ್ಟಾರೆ ಗೀತಕ್ಕನ ಬಳಿ 5.54 ಕೋಟಿ ಚರಾಸ್ತಿ ಇದ್ದರೆ ಶಿವಣ್ಣನ ಬಳಿ 18 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಇದೆ.
ಸ್ಥಿರಾಸ್ತಿ ಅಂದರೆ ಕೃಷಿ ಜಮೀನು, ವಾಸದ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಲೆಕ್ಕಾಚಾರದಲ್ಲಿ ಗೀತಾ ಶಿವರಾಜ್ ಕುಮಾರ್ ಮುಂದಿದ್ದಾರೆ. ಹಲವು ಆಸ್ತಿಗಳು ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಪಾಲುದಾರಿಕೆಯಲ್ಲಿ ಖರೀದಿ ಮಾಡಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಯ ಈಗಿನ ಮಾರುಕಟ್ಟೆ ಮೌಲ್ಯ 34.50 ಕೋಟಿ ರೂಪಾಯಿಗಳು. ಶಿವರಾಜ್ ಕುಮಾರ್ ಹೆಸರಲ್ಲಿರುವ ಸ್ಥಿರಾಸ್ತಿಯ ಒಟ್ಟು ಮೌಲ್ಯ 31 ಕೋಟಿ ರೂಪಾಯಿಗಳು.
ಶಿವಣ್ಣ ಹಾಗೂ ಗೀತಕ್ಕ ಇಬ್ಬರೂ ಸಹ ಕೆಲವು ಸಾಲಗಳನ್ನು ಸಹ ಮಾಡಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರ ಒಟ್ಟು ಸಾಲ 7.14 ಕೋಟಿ ರೂಪಾಯಿಗಳು. ಇದರಲ್ಲಿ ಪತಿ ಶಿವರಾಜ್ ಕುಮಾರ್ ಅವರಿಂದಲೇ 6 ಕೋಟಿ ಸಾಲವಾಗಿ ಪಡೆದಿದ್ದಾರೆ. ಇನ್ನು ಶಿವರಾಜ್ ಕುಮಾರ್ 17 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಈ 17 ಕೋಟಿಯಲ್ಲಿ 13.96 ಕೋಟಿ ರೂಪಾಯಿಗಳು ಸಿನಿಮಾ ಹಾಗೂ ಜಾಹೀರಾತಿನಲ್ಲಿ ನಡೆದ ಅಡ್ವಾನ್ಸ್ ಮೊತ್ತವಾಗಿದೆ. ಒಟ್ಟಾರೆಯಾಗಿ ನೋಡಿದರೆ ಗೀತಾ ಶಿವರಾಜ್ ಕುಮಾರ್ ಅವರಿಗಿಂತಲೂ ಶಿವಣ್ಣನೇ ಶ್ರೀಮಂತ. ಆದರೆ ಸ್ಥಿರಾಸ್ತಿ ಮಾತ್ರ ಗೀತಕ್ಕನ ಬಳಿ ಹೆಚ್ಚಿದೆ.