Yogi Adityanath
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮೂರನೇ ಬಾರಿ ಸಿಎಂ ಆಗುವ ಉಮೇದಿನಲ್ಲಿದ್ದಾರೆ. ತಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ತರಲು ತುಸು ಕಠಿಣವಾದ ನಿಯಮಗಳನ್ನು ಅವರು ಬಳಸಿದ್ದು ದೇಶದಾದ್ಯಂತ ಸುದ್ದಿ ಆಗಿತ್ತು. ತಪ್ಪು ಮಾಡಿದವರ ಮನೆಯನ್ನೇ ಬುಲ್ಡೋಜರ್ ಬಳಸಿ ಬೀಳಿಸಲಾಗುತ್ತಿತ್ತು ಉತ್ತರ ಪ್ರದೇಶದಲ್ಲಿ. ಇದು ದೇಶದ ಬೇರೆ ರಾಜ್ಯಗಳಲ್ಲಿ ವೈರಲ್ ವಿಷಯವಾಗಿ ಮಾರ್ಪಾಟಾಗಿತ್ತಾದರೂ ಮನೆ ಕಳೆದುಕೊಂಡವರಿಗೆ ಆಕಾಶವೇ ತಲೆ ಬಿದ್ದಂತಹಾ ಪರಿಸ್ಥಿತಿ ನಿರ್ಮಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಇದೀಗ ಯೋಗಿ ಆದಿತ್ಯನಾಥರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೆ ಮನೆ ಕಳೆದುಕೊಂಡವರಿಗೆ 25 ಲಕ್ಷ ಹಣ ನೀಡುವಂತೆ ಆದೇಶ ಮಾಡಿದೆ.
ಉತ್ತರ ಪ್ರದೇಶದಲ್ಲಿ ಹಲವು ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ. ಇವುಗಳಲ್ಲಿ ಕೆಲವು ಅಕ್ರಮ ಕಟ್ಟಡಗಳಾಗಿದ್ದರೆ ಹಲವು ‘ಶಿಕ್ಷೆಯ’ ರೂಪದಲ್ಲಿ ಮಾಡಿದ ಧ್ವಂಸಗಳಾಗಿದ್ದವು ಎನ್ನಲಾಗಿದೆ. ಹೀಗಾಗಿ ಮನೆ ಕಳೆದುಕೊಂಡ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಯೋಗಿ ಆದಿತ್ಯನಾಥರ ‘ಬುಲ್ಡೋಜರ್ ನ್ಯಾಯ’ಕ್ಕೆ ಛೀಮಾರಿ ಹಾಕಿದ್ದು 2019 ರಲ್ಲಿ ಅಕ್ರಮವಾಗಿ ಮನೆ ಬೀಳಿಸಿದ ವ್ಯಕ್ತಿಗಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
Bengaluru: ಬೆಂಗಳೂರಿನ ಈಗಿನ ಜನಸಂಖ್ಯೆ ಎಷ್ಟು? ನಿಜಕ್ಕೂ ಬೆಂಗಳೂರು ಸುರಕ್ಷಿತವಾ?
ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್’ನ ತ್ರಿ ಸದಸ್ಯರ ಪೀಠ ಯೋಗಿ ಅವರ ‘ಬುಲ್ಡೋಜರ್ ನ್ಯಾಯ’ವನ್ನು ಟೀಕಿಸಿ, ಅಧಿಕಾರಿಗಳು ರಾತ್ರೋರಾತ್ರಿ ಬುಲ್ಡೋಜರ್ ತೆಗೆದುಕೊಂಡು ಹೋಗಿ ಸಿಕ್ಕ ಸಿಕ್ಕವರ ಮನೆ ಕೆಡವಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇದನ್ನು ಅರಾಜಕತೆ ಎಂದು ಸಹ ಕರೆದಿದ್ದಾರೆ. ಈ ಹಿಂದೆ ಅಯೋಧ್ಯೆ ರಾಮ ಮಂದಿರದ ನಿರ್ಮಾಣದ ವೇಳೆಯಲ್ಲಿಯೂ ಸಹ ರಾಮ ಮಂದಿರಕ್ಕೆ ರಸ್ತೆ ಮಾಡಲು ನೂರಾರು ಮನೆಗಳನ್ನು ನೆಲಸಮ ಮಾಡಿದ್ದರು ಯೋಗಿ ಆದಿತ್ಯನಾಥ, ಅದರ ಫಲಿತಾಂಶವಾಗಿ ಅಯೋಧ್ಯೆ ಕ್ಷೇತ್ರದಲ್ಲಿಯೇ ಬಿಜೆಪಿ ಹೀನಾಯವಾಗಿ ಸೋಲು ಕಂಡಿತು. ಈಗ ಸ್ವತಃ ಯೋಗಿ ಆದಿತ್ಯನಾಥ್’ಗೂ ಸಹ ಸುಪ್ರೀಂ ಕೋರ್ಟ್’ನಲ್ಲಿ ಹಿನ್ನಡೆ ಆಗಿದೆ.