The Rameshwaram Cafe
ಬೆಂಗಳೂರಿನ ದಿ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದವನನ್ನು ಎನ್ಐಎ ಅಧಿಕಾರಿಗಳು ಇಂದು ಪಶ್ವಿಮ ಬಂಗಾಳದ ಕೊಲ್ಕತ್ತದಲ್ಲಿ ಬಂಧಿಸಿದ್ದಾರೆ. ಬಾಂಬ್ ಇರಿಸಿದ್ದ ಎನ್ನಲಾಗುತ್ತಿರುವ ಮುಸಾವಿರ್ ಶಾಜೀಬ್ ಹುಸೇನ್ ಹಾಗೂ ಈ ಕುಕೃತ್ಯದ ಮಾಸ್ಟರ್ ಮೈಂಡ್ ಅಬ್ದುಲ್ ಮತೀಹ್ ತಾಹ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇದೀಗ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಸ್ಪೋಟ ನಡೆದು 43 ದಿನಗಳ ಬಳಿಕ ಪೊಲೀಸರು ಮುಖ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದರೆ ಈ 43 ದಿನಗಳಲ್ಲಿ ಏನೇನಾಯ್ತು? ತನಿಖೆ ಹೇಗೆ ನಡೆಯಿತು? ಇಲ್ಲಿದೆ ಪ್ರಕರಣದ ಟೈಂ ಲೈನ್.
ಮಾರ್ಚ್ 1: ಕುಂದಲಪುರದ ಬಳಿಕ ದಿ ರಾಮೇಶ್ವರಮ್ ಕೆಫೆಯಲ್ಲಿ ಮಧ್ಯಾಹ್ನದ ವೇಳೆ ಸ್ಪೋಟ ಸಂಭವಿಸಿತು. ಸ್ಪೋಟದಲ್ಲಿ ಎಂಟು ಮಂದಿಗೆ ಗಾಯಗಳಾದವು, ಯಾವುದೇ ಸಾವು ಸಂಭವಿಸಿರಲಿಲ್ಲ. ಆರಂಭದಲ್ಲಿ ಇದು ಗ್ಯಾಸ್ ಲೀಕೇಜ್ನಿಂದ ಆಗಿರಬಹುದಾದ ಸ್ಪೋಟ ಎಂದು ಅನುಮಾನಿಸಲಾಗಿತ್ತು. ಆದರೆ ಬಳಿಕ ಇದು ಬಾಂಬ್ ಸ್ಪೋಟವೆಂಬುದು ತಿಳಿದು ಬಂತು.
ಮಾರ್ಚ್ 2: ಬಾಂಬ್ ಸ್ಪೋಟಿಸಿದ ಮರುದಿನವೇ ತನಿಖೆ ಚುರುಕುಗೊಳಿಸಿದ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆದರೆ ಅದರಿಂದ ಹೆಚ್ಚಿನ ಉಪಯೋಗ ಏನೂ ಆಗಲಿಲ್ಲ. ಆದರೆ ಹೋಟೆಲ್ನ ಸಿಸಿಟಿವಿಯಿಂದ ಆರೋಪಿಯ ಗುರುತು ಸಿಕ್ಕಿ, ವಿವಿಧ ಸಿಸಿಟಿವಿ ಫುಟೇಜ್ಗಳ ಮೂಲಕ ಆತನ ಚಲನವಲನಗಳನ್ನು ಪೊಲೀಸರು ಗಮನಿಸಲು ಆರಂಭಿಸಿದರು.
ಇದನ್ನೂ ಓದಿ: ಬೆಂಗಳೂರಿನ ಸುತ್ತ-ಮುತ್ತ ಇರುವ ಹತ್ತು ಅತ್ಯುತ್ತಮ ಇಡ್ಲಿ ಹೋಟೆಲ್ಗಳ ಪಟ್ಟಿ
ಮಾರ್ಚ್ 7: ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತ ಉಗ್ರನ ರೇಖಾ ಚಿತ್ರ ಹಾಗೂ ಸಿಸಿಟಿವಿಯಿಂದ ಸಂಗ್ರಹಿಸಿದ ಕೆಲವು ಚಿತ್ರಗಳನ್ನು ತನಿಖಾ ಸಂಸ್ಥೆ ಬಿಡುಗಡೆ ಮಾಡಿತು. ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಲಾಯ್ತು.
ಮಾರ್ಚ್ 13: ಸ್ಪೋಟದ ಬಳಿಕ ಆರೋಪಿ ಸಾಗಿದ ಹಾದಿಗಳ ಹುಟುಕಾಟದಲ್ಲಿ ನಿರತರಾಗಿದ್ದ ತನಿಖಾ ಸಂಸ್ಥೆ ಬಳ್ಳಾರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬ್ಬೀರ್ ಎಂಬಾತನನ್ನು ಬಂಧಿಸಿತು. ಈತ ಆರೋಪಿ ಮುಸಾವಿರ್ ಶಾಜೀಬ್ ಹುಸೇನ್ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.
ಮಾರ್ಚ್ 20: ಆರೋಪಿ ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ, ತೆಲಂಗಾಣ ಇನ್ನಿತರೆ ಕಡೆಗಳಿಗೆ ಪ್ರಯಾಣ ಮಾಡಿರುವುದನ್ನು ಅರಿತ ಪೊಲೀಸರು ಹಲವು ದಿನಗಳ ಕಾಲ ವಿವಿಧ ನಗರಗಳಿಗೆ ತೆರಳಿ ತನಿಖೆ ನಡೆಸಿದರು.
ಏಪ್ರಿಲ್ 5: ದಿ ರಾಮೇಶ್ವರಮ್ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ತನಿಖಾ ಸಂಸ್ಥೆ ಎಎನ್ಐ ಬಿಜೆಪಿ ಕಾರ್ಯಕರ್ತನೊಬ್ಬನನ್ನು ವಶಕ್ಕೆ ಪಡೆದಿದೆ ಎಂಬ ಸುದ್ದಿ ಹರಿದಾಡಿತು.
ಏಪ್ರಿಲ್ 5: ಅದೇ ದಿನ ಈ ಬಗ್ಗೆ ಸ್ಪಷ್ಟನೆ ನೀಡಿದ ಎನ್ಐಎ, ಆರೋಪಿಯ ಬಗ್ಗೆ ತಿಳಿದುಕೊಳ್ಳುವ ದೃಷ್ಟಿಯಿಂದ ಶಂಕಿತರ ಶಾಲೆ-ಕಾಲೇಜು ದೆಸೆಯ ಗೆಳೆಯರನ್ನು ಕರೆದು ವಿಚಾರಣೆ ಮಾಡಲಾಗುತ್ತಿದೆಯಷ್ಟೆ. ವಿಚಾರಣೆ ನಡೆಸುತ್ತಿರುವವರೆಲ್ಲ ಆರೋಪಿಗಳು, ಶಂಕಿತರಲ್ಲ ಎಂದಿತು.
ಏಪ್ರಿಲ್ 08: ಕಳಸ ಮೂಲದ ಮುಜಾಮಿಲ್ ಅನ್ನು ಎನ್ಐಎ ಬಂಧಿಸಿ ವಿಚಾರಣೆ ನಡೆಸಿತ್ತು. ಈತನೊಂದಿಗೆ ಇಬ್ಬರು ಆರೋಪಿಗಳು ಸತತವಾಗಿ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಈತ ನೀಡಿದ ಮಾಹಿತಿಯಿಂದಲೇ ಆರೋಪಿಗಳು ಕೊಲ್ಕತ್ತದಲ್ಲಿರುವುದು ತಿಳಿದು ಬಂದಿದೆ.
ಏಪ್ರಿಲ್ 11: ಕೋಲ್ಕತ್ತದ ಖಾಸಗಿ ಹೋಟೆಲ್ನಲ್ಲಿದ್ದ ಮುಸಾವಿರ್ ಶಾಜೀಬ್ ಹುಸೇನ್ ಹಾಗೂ ಈ ಕುಕೃತ್ಯದ ಮಾಸ್ಟರ್ ಮೈಂಡ್ ಅಬ್ದುಲ್ ಮತೀಹ್ ಇಬ್ಬರನ್ನೂ ಎನ್ಐಎ ತನಿಖಾ ಸಂಸ್ಥೆ ವಶಕ್ಕೆ ಪಡೆಯಿತು.
ಏಪ್ರಿಲ್ 12: ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳ ಪರಗಣ ಜಿಲ್ಲೆಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ, ಅಲ್ಲಿ ಆರೋಪಿಗಳನ್ನು ಟ್ರಾನ್ಸಿಟ್ ಕಸ್ಟಡಿಗೆ ಎನ್ಐಎ ಪಡೆದಿದ್ದು, ಇದೀಗ ಬೆಂಗಳೂರಿಗೆ ಕರೆತರಲಾಗುತ್ತಿದೆ.