Mobile in India
ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳಿದ್ದನಂತೆ ಗೌತಮ ಬುದ್ಧ, ಈಗ ಆಗಿದ್ದರೆ ಮೊಬೈಲ್ ಇಲ್ಲದ ಮನೆಯಿಂದ ಸಾಸಿವೆ ತರಲು ಹೇಳುತ್ತಿದ್ದರೇನೋ. ಊಟ, ಉಡುಪು, ನಿದ್ದೆಯಂತೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ ಈ ಮೊಬೈಲ್. ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯಿಂದಾಗಿ ಇಂದು ಎಲ್ಲರ ಬಳಿಯೂ ಮೊಬೈಲ್‌ಗಳಿವೆ. ಕರೆಗಳು ಸಹ ಅನ್ ಲಿಮಿಟೆಡ್, ನಿಗದಿತ ಮೊತ್ತಕ್ಕೆ ರೀಚಾರ್ಜ್ ಮಾಡಿಸಿದರೆ, ನಿಗದಿತ ದಿನಗಳ ಒಳಗೆ ಎಷ್ಟು ಹೊತ್ತಾದರೂ ಮಾತನಾಡಬಹುದು. ಆದರೆ ಭಾರತದಲ್ಲಿ ಮೊದಲ ಮೊಬೈಲ್ ಕರೆ ಮಾಡಿದ್ದು ಯಾರು? ಮತ್ತು ಆಗ ಒಂದು ಮೊಬೈಲ್ ಕರೆ ಮಾಡಲು ಎಷ್ಟು ಹಣ ಖರ್ಚಾಗುತ್ತಿತ್ತು ಗೊತ್ತೆ?
1995, ಜುಲೈ 31 ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಮರೆಯಲಾಗದ ದಿನ. ಏಕೆಂದರೆ ಅದೇ ದಿನ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಕರೆ ಮಾಡಲಾಯ್ತು ಅದೂ ಕಮರ್ಶಿಯಲಿ. ಆ ಮೊಟ್ಟ ಮೊದಲ ಮೊಬೈಲ್ ಕರೆ ಮಾಡಿದ ವ್ಯಕ್ತಿ ಪಶ್ಚಿಮ ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು. ಕೊಲ್ಕತ್ತದಿಂದ ಮಾಡಿದ ಕರೆಯನ್ನು ದೆಹಲಿಯಲ್ಲಿ ಕುಳಿತಿದ್ದ ವ್ಯಕ್ತಿ ಸ್ವೀಕರಿಸಿದರು. ಕರೆ ಸ್ವೀಕರಿಸಿದ ವ್ಯಕ್ತಿಯ ಹೆಸರು ಸುಖ ರಾಂ. ಅವರು ಆಗಿನ ದೂರಸಂಪರ್ಕ ಖಾತೆಯ ಕೇಂದ್ರ ಸಚಿವರಾಗಿದ್ದರು. ಅಂದಹಾಗೆ ಈ ಕರೆಯನ್ನು ನೊಕಿಯಾ ಮೊಬೈಲ್ ಫೋನ್ ನಲ್ಲಿ ಮಾಡಲಾಗಿತ್ತು.
ಈಗಿನಂತೆ ಆಗ ಏರ್ಟೆಲ್, ಜಿಯೋ ಎಂದೆಲ್ಲ ಇರಲಿಲ್ಲ. ಆಗ ಜ್ಯೋತಿ ಬಸು ಅವರು ಕರೆ ಮಾಡಿದ್ದು ಮೋದಿ ಟೆಲ್ಟ್ರಾ ಸಂಸ್ಥೆಯ ನೆಟ್ ವರ್ಕ್ ಬಳಸಿ. ಭಾರತದ ಬಿಕೆ ಮೋದಿ ಸಂಸ್ಥೆ ಹಾಗೂ ಆಸ್ಟ್ರೇಲಿಯಾದ ಟೆಲ್ ಸ್ಟ್ರಾ ಸಂಸ್ಥೆ ಜಂಟಿಯಾಗಿ ನೆಟ್ ವರ್ಕಿಂಗ್ ಸೇವೆಯನ್ನು ಭಾರತದಲ್ಲಿ ಆರಂಭಿಸಿತ್ತು. ಕಲ್ಕತ್ತದಿಂದ ನವ ದೆಹಲಿಗೆ ಮಾಡಿದ್ದ ಆ ಒಂದು ಕರೆಗೆ 8.40 ರೂಪಾಯಿ ಖರ್ಚಾಗಿತ್ತು. ಮಾತ್ರವಲ್ಲದೆ ಕರೆ ಸ್ವೀಕಾರ ಮಾಡಿದ್ದಕ್ಕೂ 5 ರೂಪಾಯಿ ಖರ್ಚಾಗಿತ್ತು. ಅಲ್ಲಿಗೆ ಭಾರತದಲ್ಲಿ ಮಾಡಲಾದ ಮೊದಲ ಕರೆಗೆ 13.40 ರೂಪಾಯಿ ಹಣ ಖರ್ಚಾಗಿತ್ತು.
ಆಗೆಲ್ಲ ಮೊಬೈಲ್ ಕರೆಗಳು ಬಹಳ ದುಬಾರಿ ಆಗಿದ್ದವು. ಕರೆ ಮಾಡಲು ಮಾತ್ರವಲ್ಲ ಸ್ವೀಕರಿಸಲು ಸಹ ಹಣ ಕೊಡಬೇಕಾಗಿತ್ತು. ಸಾಮಾನ್ಯ ಸಮಯದಲ್ಲಿ ಒಂದು ನಿಮಿಷದ ಕರೆಗೆ 8 ರೂಪಾಯಿ ಚಾರ್ಜ್ ಆಗುತ್ತಿದ್ದರೆ ಪೀಕ್ ಸಮಯದಲ್ಲಿ ನಿಮಿಷಕ್ಕೆ 16, 20 ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಬಹಳ ವರ್ಷಗಳ ವರೆಗೆ ಮೊಬೈಲ್ ಕರೆಗಳು ದುಬಾರಿ ಆಗಿಯೇ ಇದ್ದವು. ಸಾಮಾನ್ಯ ಜನರ ಕೈಗೆ ಮೊಬೈಲ್ ಎಟುಕಲು ಆರಂಭಿಸಿದಾಗಲೂ ಸಹ ನಿಮಿಷಕ್ಕೆ ಎರಡು ರೂಪಾಯಿ, ಒಂದು ರೂಪಾಯಿ ವರೆಗೆ ಕರೆಗಳಿಗೆ ಚಾರ್ಜ್ ಮಾಡಲಾಗುತ್ತಿತ್ತು.
iPhone 15 Pro: ಆಪಲ್ ಸಂಸ್ಥೆ ಒಂದು ಐಫೋನ್ ತಯಾರು ಮಾಡಲು ಖರ್ಚು ಮಾಡುವ ಹಣ ಎಷ್ಟು?
ಬಳಿಕ ಡೊಕೊಮೊ ಬಂದು ಸೆಕೆಂಡ್ ಗೆ ಒಂದು ಪೈಸೆ ಚಾರ್ಜ್ ಮಾಡಿತು. ಬಳಿಕ ಕೆಲವು ಸಂಸ್ಥೆಗಳು ಅದೇ ಸಂಸ್ಥೆಯ ನೆಟ್ ವರ್ಕ್ ಗೆ ಕರೆ ಮಾಡಿದರೆ ಕರೆ ಉಚಿತವೆಂದು ಘೋಷಣೆ ಮಾಡಿದವು. ಡೊಕೊಮೊ ಟು ಡೊಕೊಮೊ ಫ್ರೀ, ರಿಲಯನ್ಸ್ ಟು ರಿಲಯನ್ಸ್ ಫ್ರೀ ಹೀಗೆ ಕೆಲವು ಆಫರ್ ಗಳು ಬಂದವು. ಆದರೆ 2016 ರಲ್ಲಿ ಜಿಯೋ ಲಾಂಚ್ ಆಗುವ ಮೂಲಕ ಇಡೀ ನೆಟ್ ವರ್ಕಿಂಗ್ ಗೇಮ್ ಅನ್ನೇ ಬದಲು ಮಾಡಿಬಿಟ್ಟಿತು.