Bangarpete
ಕೋಲಾರದ ಬಳಿಯ ಬಂಗಾರಪೇಟೆಯಲ್ಲಿ ಮೂರಂತಸ್ಥಿನ ಕಟ್ಟೆ ಏಕಾಏಕಿ ಕುಸಿದು ಬಿದ್ದಿದೆ. ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಏಕಾ-ಏಕಿ ಕುಸಿದು ಬಿದ್ದಿರುವ ಮನೆ ಹೊಸ ಮನೆಯಂತೆ ಅಥವಾ ಹೆಚ್ಚೇನು ಹಳೆಯ ಮನೆಯಂತೆ ಕಾಣುತ್ತಿಲ್ಲ. ಆದರೂ ಒಮ್ಮೆಲೆ ಬಿದ್ದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣದಿಂದಾಗಿ ಯಾವುದೇ ಜೀವ ಹಾನಿ ಆಗಿಲ್ಲವಾದರೂ, ಮನೆಯಲ್ಲಿದ್ದ ಹಲವು ವಸ್ತುಗಳು ಹಾನಿ ಆಗಿವೆ. ದೊಡ್ಡ ಮೊತ್ತದ ನಷ್ಟ ಉಂಟಾಗಿದೆ. ಆದರೆ ಆ ಮನೆ ಕುಸಿಯಲು ಕಾರಣವೇನು? ಇಲ್ಲಿದೆ ಮಾಹಿತಿ.
ಮನೆ ಕುಸಿದಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಮನೆಯ ಗ್ರೌಂಡ್ ಫ್ಲೋರ್’ನಲ್ಲಿ ಏನೋ ಕಾಮಗಾರಿ ನಡೆಯುತ್ತಿತ್ತು. ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ಅಂಗಡಿ ಮಳಿಗೆಗಳು ಇತ್ತು. ಅವುಗಳ ರಿಪೇರಿ ಕಾರ್ಯ ಮಾಡಲಾಗುತ್ತಿತ್ತು. ಆ ಕಾರಣಕ್ಕೆ ಗೋಡೆಗಳನ್ನು ಒಡೆಯಲಾಗಿತ್ತು. ಇಡೀ ಕಟ್ಟಡಕ್ಕೆ ಆಧಾರವಾಗಿದ್ದ ಗೋಡೆಗಳನ್ನು ಒಡೆದ ಕಾರಣಕ್ಕೆ ಆ ಬಿಲ್ಡಿಂಗ್ ಮುಂಭಾರ ತಡೆದುಕೊಳ್ಳದೆ ಉರುಳಿ ಬಿದ್ದಿದೆ.
ಗಮನಿಸಬೇಕಾದ ಅಂಶವೆಂದರೆ, ಅಸಲಿಗೆ ಆ ಕಟ್ಟಡವನ್ನು ಈಗಾಗಲೇ ಎರಡು ಬಾರಿ ಪುನರ್ ನವೀಕರಣ ಮಾಡಲಾಗಿತ್ತು. ಮೊದಲಿಗೆ ಒಂದು ಫ್ಲೋರ್ ನ ಮನೆ ಆಗಿತ್ತು. ಮೊದಲು ಮನೆ ಕಟ್ಟುವಾಗ ಅದಕ್ಕೆ ತಕ್ಕಂತೆ ಪಾಯ ಹಾಕಲಾಗಿತ್ತು, ಸಾಧಾರಣ ಪಿಲ್ಲರ್’ಗಳನ್ನು ಹಾಕಿ(?) ಕಟ್ಟಲಾಗಿತ್ತು. ಅದಾದ ಬಳಿಕ ಮನೆಯ ಮಾಲೀಕ ಕೆಳಗಿನ ಮನೆಯನ್ನು ಅಂಗಡಿಯಾಗಿ ಮಾರ್ಪಾಡು ಮಾಡಿ, ಮೇಲೆ ವಾಸಿಸಲು ಮನೆ ಕಟ್ಟಿದ. ಕೆಳಗೆ ಭಾರಿ ಹೊರುವ ಪಿಲ್ಲರ್’ಗಳು ಇಲ್ಲದೆ ಅದಾಗಲೇ ಆ ಮನೆ ಶಕ್ತಿ ಕಳೆದುಕೊಂಡಿತ್ತು. ಅದಾದ ಬಳಿಕ ಮತ್ತೆ ಕೆಳಗಿನ ಅಂಗಡಿಯ ರಿಪೇರಿಗಾಗಿ ಅದಾಗಲೇ ಶಕ್ತಿ ಕಳೆದುಕೊಂಡಿದ್ದ ಗೋಡೆಗಳನ್ನು ಒಡೆದ ಕಾರಣ ಆ ಇಡೀ ಕಟ್ಟಡ ಉರುಳಿ ಬಿದ್ದಿದೆ.
ಹಾಗಿದ್ದರೆ ಮನೆಯ ರಿನೋವೇಶನ್ ಅಥವಾ ಹಳೆಯ ಮನೆಯ ಮೇಲೆ ಮನೆ ಕಟ್ಟಡ ಕಟ್ಟಬೇಕಾದರೆ ಏನು ಗಮನಿಸಬೇಕು? ಹೇಗೆ ಕಟ್ಟಬೇಕು? ಇಲ್ಲಿದೆ ಉತ್ತರ. ಯಾವುದೇ ಮರು ನಿರ್ಮಾಣ ಅಥವಾ ಈಗ ಇರುವ ಮನೆಯ ಮೇಲೆ ಇನ್ನೊಂದು ಮನೆ ಕಟ್ಟಬೇಕಾದರೆ ಕಡ್ಡಾಯವಾಗಿ ಕೆಲವು ಪರೀಕ್ಷೆಗಳನ್ನು ಮಾಡಿಸಬೇಕು. ಪ್ರಮುಖವಾಗಿ ರಿಬೌಂಡ್ ಹ್ಯಾಮರ್ ಟೆಸ್ಟ್. ಇದರಿಂದ ಗೋಡೆ, ಪಿಲ್ಲರ್’ಗಳ ಶಕ್ತಿ ಎಷ್ಟೆಂಬುದು ತಿಳಿದು ಬರುತ್ತದೆ. ಗೋಡೆ ಹಾಗೂ ಪಿಲ್ಲರ್’ಗಳು ಎಷ್ಟು ಭಾರಿ ತಡೆದುಕೊಳ್ಳಬಲ್ಲವು ಎಂಬುದು ಗೊತ್ತಾಗುತ್ತದೆ.
Pawan Kalyan: ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಪವನ್ ಕಲ್ಯಾಣ್-ಚಂದ್ರಬಾಬು ನಾಯ್ಡು ನಡುವೆ ಭಿನ್ನಾಭಿಪ್ರಾಯ
ಇನ್ನೊಂದು ಪರೀಕ್ಷೆಯೆಂದರೆ ಅಲ್ಟ್ರಾ ಪಲ್ಸ್ ವೆಲಾಸಿಟಿ ಟೆಸ್ಟ್. ಈ ಪರೀಕ್ಷೆ ಸಹ ಗೋಡೆ, ಚಾವಣಿ, ಪಾಯದ ಶಕ್ತಿ ಎಷ್ಟೆಂಬುದನ್ನು ತಿಳಿಸಿಕೊಡುತ್ತದೆ. ಈ ಎರಡು ಪ್ರಮುಖ ಪರೀಕ್ಷೆಗಳನ್ನು ನಡೆಸಿ, ಎಂಜಿನಿಯರ್ ಸಲಹೆ ಪಡೆದು, ಮೇಲೆ ಹೇಳಲಾದ ಪರೀಕ್ಷೆಗಳಿಂದ ಬಂದ ಫಲಿತಾಂಶದ ಆಧಾರದಲ್ಲಿಯೇ ಮರು ನಿರ್ಮಾಣ ಕಾರ್ಯವನ್ನು ಮಾಡಬೇಕಿರುತ್ತದೆ. ಇಲ್ಲವಾದರೆ ಇಂದು ಬಂಗಾರಪೇಟೆಯಲ್ಲಿ ಆದಂತೆ ಕಟ್ಟಡ ಕುಸಿದು ಬೀಳುತ್ತದೆ.